ತುಗಲುಕ್ ವಂಶ -
ಆಳ್ವಿಕೆಯ ಕಾಲ ಸು.1320-1414. ದೆಹಲಿಯಿಂದ ಆಳಿದ ತುರ್ಕಿ ಪಂಗಡಕ್ಕೆ ಸೇರಿದ ಸುಲ್ತಾನ್ ವಂಶ. ಗಾಜಿ ಮಾಲಿಕ್ ಮತ್ತು ಅವನ ಸಹೋದರರಾದ ರಜಬ್ ಮತ್ತು ಅಬೂಬಕ್ರ್ ಇವರು ಅಲಾಉದ್-ದೀನ್ ಖಲ್ಜಿಯ ಕಾಲದಲ್ಲಿ ಭಾರತಕ್ಕೆ ಬಂದು ಖಲ್ಜಿ ಸೈನ್ಯವನ್ನು ಸೇರಿದರು. ಗಾಜಿ ಮಾಲಿಕ್ ತನ್ನ ಸ್ವಸಾಮಥ್ರ್ಯದಿಂದ ಸೈನ್ಯದಲ್ಲಿ ಕ್ರಮೇಣ ಉತ್ಕರ್ಷೆಗೆ ಬಂದ. ಅಲಾ-ಉದ್-ದೀನನ ಮರಣಾನಂತರ ದೆಹಲಿಯ ಸಿಂಹಾಸನವನ್ನು ಆಕ್ರಮಿಸಿದ ಖುಸ್ರಾವ್ ಖಾನನನ್ನು ಸೋಲಿಸಿ ಕೊಲ್ಲಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದ. ಪ್ರಮುಖ ತುರ್ಕಿ ಸರ್ದಾರರು ಈತನೇ ಮುಂದಿನ ರಾಜನೆಂದು ಘೋಷಿಸಿದಾಗ ಘಿಯಾಸ್-ಉದ್-ದೀನ್ ತುಗಲಕ್ (ನೋಡಿ- ಘಿಯಾಸ್---ಉದ್---ದೀನ್-ತುಘಲಕ್) ಎಂಬ ಅಭಿಧಾನದೊಡನೆ ದೆಹಲಿಯ ಸಿಂಹಾಸನವೇರಿ (1320) ತುಗಲಕ್ ವಂಶವನ್ನು ಸ್ಥಾಪಿಸಿದ. ಮುಂದೆ ಐದು ವರ್ಷಗಳ ಕಾಲ ಭದ್ರ ಆಡಳಿತ ನಡೆಸಿ ಆಕಸ್ಮಿಕವಾಗಿ ಮರಣ ಹೊಂದಿದ (1225). ಈತನ ಅನಂತರ ಈತನ ಮಗ ಜಾನ್‍ಖಾನ್ ಮುಹಮ್ಮದ್ ತುಗಲುಕ್ ಎಂಬ ಹೆಸರಿನೊಡನೆ ಪಟ್ಟವೇರಿದ. ತುಗಲಕ್ ವಂಶದಲ್ಲೇ ಈತ ವಿಚಿತ್ರ ಹಾಗೂ ವಿರೋಧಾಭಾಸಕರ ನಡವಳಿಕಗಳಿಗಾಗಿ ಪ್ರಸಿದ್ಧನಾಗಿದ್ದಾನೆ. ಈತ ತನ್ನ ಪಾಂಡಿತ್ಯಕ್ಕೆ, ಕ್ರೌರ್ಯಕ್ಕೆ ಮತ್ತು ಔದಾರ್ಯಕ್ಕೆ ಹೆಸರಾಗಿದ್ದಾನೆ. ದೇವಗಿರಿಗೆ ರಾಜಧಾನಿಯ ಬದಲಾವಣೆ, ತಾಮ್ರದ ನಾಣ್ಯಗಳ ಚಲಾವಣೆ, ವಿಫಲ ಕೃಷಿ ಸುಧಾರಣೆಗಳು- ಇವು ಈತನ ಆಡಳಿತ ಕಾಲದ ಮುಖ್ಯ ಘಟನೆಗಳು. ಈತನ ಕಾಲದಲ್ಲಿ ರಾಜ್ಯದಲ್ಲಿ ಅರಾಜಕತೆ ತಲೆದೋರಿತು. 1351ರಲ್ಲಿ ಮುಹಮ್ಮದ್ ಮರಣ ಹೊಂದಿದಾಗ ಇವನ ಚಿಕ್ಕಪ್ಪನ ಮಗ ಫಿರೋಜ್ ಷಾ ಪಟ್ಟವೇರಿದ. ಫಿರೋಜ್ ಷಾ ತುಗಲಕ್ ವಂಶದ ಅತ್ಯಂತ ಪ್ರಸಿದ್ಧನಾದ ರಾಜ. ಈತ 37 ವರ್ಷಗಳಷ್ಟು ದೀರ್ಘಕಾಲ ರಾಜ್ಯವಾಳಿದ. ಈತನದು ಇಸ್ಲಾಮೀ ಪ್ರಭುತ್ವ. ಈತ ಆಡಳಿತವನ್ನು ಶರೀಯತ್‍ಗೆ ಅನುಸಾರವಾಗಿ ನಡೆಸುತ್ತಿದ್ದ. ಪ್ರಪ್ರಥಮ ಬಾರಿ ಈತ ಬ್ರಾಹ್ಮಣರ ಮೇಲೆ ಜಿಜಿಯಾತೆರಿಗೆ ವಿಧಿಸಿದ. ಅನೇಕ ಹಿಂದೂ ಮಂದಿರಗಳನ್ನು ಕೆಡವಿಸಿದ. ಅನೇಕ ಮಸೀದಿ ಹಾಗೂ ಮದರ್ಸಾಗಳನ್ನು (ಪಾಠಶಾಲೆ) ಕಟ್ಟಿಸಿದ. ಫಿರೋಜಾಬಾದ್ ಮತ್ತು ಚೌನಪುರ ಪಟ್ಟಣಗಳ ಸ್ಥಾಪನೆ ಆದದ್ದು ಈತನ ಕಾಲದಲ್ಲೇ. ಇವನು ಆಳುತ್ತಿದ್ದಾಗ ಇಬ್ನ್‍ಬತೂತಾ ಎಂಬ ಪ್ರವಾಸಿ ಭಾರತವನ್ನು ಸಂದರ್ಶಿಸಿದ. ಫರೋಜ್ ಷಾನ ಅನಂತರ ಸ್ವಲ್ಪ ಸ್ವಲ್ಪ ಕಾಲ ಅನುಕ್ರಮವಾಗಿ 2ನೆಯ ಘಿಯಾಸುದ್ದೀನ್, ಅಬೂಬ್ರಕ್, 3ನೆಯ ಮುಹಮ್ಮದ್, 1ನೆಯ ಸಿಕಂದರ್, ಮಹಮೂದ್ ಮತ್ತು ನುಸರತ್ ಷಾ ಎಂಬ ಆರು ಜನ ತುಗಲಕ್ ಸುಲ್ತಾನರು ಆಳ್ವಿಕೆ ನಡೆಸಿದರು. ಇವರ ಕಲವೆಲ್ಲ ಎವಂಬ ಆರು ಜನ ತುಗಲಕ್ ಸುಲ್ತಾನರು ಆಳ್ವಿಕೆ ನದೆಸಿದರು. ಇವರ ಕಾಲವೆಲ್ಲ ಪರಸ್ಪರ ಕಚ್ಚಾಟದಲ್ಲೇ; ಕಳೆಯಿತು. ಮಮೂದನ ಆಳ್ವಿಕೆಯ ಕಾಲದಲ್ಲಿ (1395) ತೈಮೂರ್ ಭಾರತದ ಮೇಲೆ ದಂಡೆತ್ತಿ ಬಂದು ದೇಶವನ್ನು ಕೊಳ್ಳೆ ಹೊಡೆದ. ದೆಹಲಿ ಪಾಳುಬಿತ್ತು. ಬಲು ಬೇಗ ರಾಜ್ಯ ದುರ್ಬಲವಾಗಿ ಸಯ್ಯದ್ ವಂಶದವರ ಪಾಲಾಯಿತು.				(ಎಚ್.ಎಸ್.ಎಸ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ